ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿ | ಕಿವೀಸ್ ವಿರುದ್ಧ ಸರಣಿ ಸೋಲು, ಭಾರತದ ಅಗ್ರ ಸ್ಥಾನಕ್ಕೆ ಸಂಚಕಾರ
PC : PTI
ಹೊಸದಿಲ್ಲಿ : ಭಾರತೀಯ ನೆಲದಲ್ಲಿ ಇದೇ ಮೊದಲ ಬಾರಿ ಟೆಸ್ಟ್ ಸರಣಿಯನ್ನು ಗೆದ್ದಿರುವ ನ್ಯೂಝಿಲ್ಯಾಂಡ್ ತಂಡ ಇತಿಹಾಸ ನಿರ್ಮಿಸಿದೆ. ಈ ಫಲಿತಾಂಶವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ(ಡಬ್ಲ್ಯುಟಿಸಿ) ಅಂಕಪಟ್ಟಿಯ ಮೇಲೆ ಗಮನಾರ್ಹ ಪ್ರಭಾವ ಬೀರಿದೆ.
ಡಬ್ಲ್ಯುಟಿಸಿ ಋತುವಿನಲ್ಲಿ ಭಾರತವು 4ನೇ ಸೋಲು ಕಂಡಿರುವ ಕಾರಣ ಇದೀಗ ಆಸ್ಟ್ರೇಲಿಯಕ್ಕಿಂತ 0.32 ಶೇ.ಅಂಕದೊಂದಿಗೆ ಮುಂದಿದೆ. ಭಾರತವು 62.82 ಅಂಕ ಹೊಂದಿದ್ದರೆ, ಆಸ್ಟ್ರೇಲಿಯವು 62.50 ಅಂಕ ಹೊಂದಿದೆ.
ಸ್ವದೇಶದಲ್ಲಿ ಸತತ 2 ಪಂದ್ಯದಲ್ಲಿನ ಸೋಲು ಭಾರತ ತಂಡವು ಸತತ ಮೂರನೇ ಬಾರಿ ಡಬ್ಲ್ಯುಟಿಸಿ ಫೈನಲ್ಗೆ ತಲುಪುವ ಅವಕಾಶವನ್ನು ಡೋಲಾಯಮಾನವಾಗಿಸಿದೆ.
ಡಬ್ಲ್ಯುಟಿಸಿ ಅಂಕಪಟ್ಟಿಯು ಈಗ ಮುಕ್ತವಾಗಿದ್ದು, ಹಲವು ತಂಡಗಳೂ ಅಗ್ರ ಎರಡು ಸ್ಥಾನಗಳನ್ನು ಪಡೆಯಲು ಸ್ಪರ್ಧೆಯಲ್ಲಿವೆ. ಅಗ್ರ 2 ಸ್ಥಾನ ಪಡೆಯುವ ತಂಡಗಳು 2025ರ ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆಯುತ್ತವೆ. ಆಸ್ಟ್ರೇಲಿಯದಲ್ಲಿ ನಡೆಯುವ ಮುಂಬರುವ ಬಾರ್ಡರ್-ಗವಾಸ್ಕರ್ ಟ್ರೋಫಿಯು ಹೆಚ್ಚು ಮಹತ್ವ ಪಡೆದಿದ್ದು, ಫೈನಲ್ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಭಾರತವು ಈ ಸರಣಿಯನ್ನು ಗೆಲ್ಲಬೇಕಾದ ಅಗತ್ಯವಿದೆ.
ಈ ಗೆಲುವಿನೊಂದಿಗೆ ನ್ಯೂಝಿಲ್ಯಾಂಡ್ ತಂಡ 50.00 ಶೇ.ಪಾಯಿಂಟ್ಸ್ನೊಂದಿಗೆ 4ನೇ ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ(47.62)ತಂಡವನ್ನು ಹಿಂದಿಕ್ಕಿದೆ. ಶ್ರೀಲಂಕಾ ತಂಡ(55.56 ಪಾಯಿಂಟ್ಸ್)ಮೂರನೇ ಸ್ಥಾನ ಉಳಿಸಿಕೊಂಡಿದೆ.
ಇಂಗ್ಲೆಂಡ್ ವಿರುದ್ಧ ರಾವಲ್ಪಿಂಡಿಯಲ್ಲಿ ನಡೆದಿರುವ 3ನೇ ಟೆಸ್ಟ್ ಪಂದ್ಯವನ್ನು 9 ವಿಕೆಟ್ಗಳಿಂದ ಜಯಿಸಿ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಪಾಕಿಸ್ತಾನ ತಂಡ 33.33 ಅಂಕದೊಂದಿಗೆ 7ನೇ ಸ್ಥಾನಕ್ಕೇರಿದೆ.
ಭಾರತ ತಂಡವು ನ.1ರಿಂದ ಮುಂಬೈನಲ್ಲಿ ನ್ಯೂಝಿಲ್ಯಾಂಡ್ ತಂಡದ ಎದುರು 3ನೇ ಟೆಸ್ಟ್ ಪಂದ್ಯವನ್ನು ಆಡಲಿದ್ದು, ಡಬ್ಲ್ಯುಟಿಸಿ ಫೈನಲ್ ವಿಶ್ವಾಸವನ್ನು ಉಳಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.