ಡಬ್ಲ್ಯುಟಿಟಿ ಚಾಂಪಿಯನ್ಸ್ | ಮಣಿಕಾ ಬಾತ್ರಾ ಅಭಿಯಾನ ಅಂತ್ಯ

Hero Image

ಮಣಿಕಾ ಬಾತ್ರಾ | PC : X/@manikabatra_TT

ಪ್ಯಾರಿಸ್ : ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಡಬ್ಲ್ಯುಟಿಟಿ ಚಾಂಪಿಯನ್ಸ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಆಟಗಾರ್ತಿ ಕ್ವಿಯಾನ್ ಟಿಯಾನಿ ವಿರುದ್ದ ನೇರ ಗೇಮ್ಗಳ ಅಂತರದಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದರು.

ವಿಶ್ವದ ನಂ.30ನೇ ಆಟಗಾರ್ತಿ ಬಾತ್ರಾ ಶನಿವಾರ ರಾತ್ರಿ ಕೇವಲ 25 ನಿಮಿಷಗಳಲ್ಲಿ ಅಂತ್ಯಗೊಂಡ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಟನಿಯಾ ವಿರುದ್ಧ 8-11, 8-11, 10-12 ಅಂತರದಿಂದ ಸೋತಿದ್ದಾರೆ.

ಹಲವು ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಜಯಿಸಿರುವ ಬಾತ್ರಾ, ಎಲ್ಲ ಮೂರು ಪಂದ್ಯಗಳಲ್ಲಿ ಉತ್ತಮ ಹೋರಾಟ ನೀಡಿದ್ದರು. ಆದರೆ, ಚೀನಾದ ಎದುರಾಳಿ ನಿರ್ಣಾಯಕ ಅಂಕ ಗಳಿಸಿ ಜಯಶಾಲಿಯಾದರು.

ಡಬ್ಲ್ಯುಟಿಟಿ ಕ್ವಾರ್ಟರ್ ಫೈನಲ್ ತಲುಪಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿರುವ ಬಾತ್ರಾ ರೊಮೇನಿಯಾದ ಬೆರ್ನಾಡೆಟ್ ಸಾಕ್ಸ್ ರನ್ನು 11-9, 6-11, 13-11, 11-9 ಅಂತರದಿಂದ ಸೋಲಿಸಿದ್ದರು. ಈ ಮೂಲಕ ಅಂತಿಮ-8ರ ಸುತ್ತು ಪ್ರವೇಶಿಸಿದ್ದರು.

ಟನಿಯಾ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ತಮ್ಮದೇ ದೇಶದ ಅಗ್ರ ಶ್ರೇಯಾಂಕದ ಯಿಡಿ ವಾಂಗ್ರನ್ನು 11-7, 11-9, 13-11 ಅಂತರದಿಂದ ಸೋಲಿಸಿದ್ದರು.